Blog

ತರಕರಡಿಯ ನಿಶೆ ವಿಹಾರ

ಗೂಢ, ನಿಶಾಚರಿಯೆನ್ನಲಾದ, ಹೆಚ್ಚಾಗಿ ಒಣ ಆವಾಸನೆಲೆಗಳಲ್ಲಿ ಕಂಡುಬರುವ ತರಕರಡಿ – ರಾಟೆಲ್, (ಮೆಲ್ಲಿವೋರ ಕೆಪೆನ್‌ಸಿಸ್),  ‘ಮಸ್ಟೆಲಿಡೇ’ (Mustelidae) ಕುಟುಂಬವರ್ಗಕ್ಕೆ ಸೇರಿದ ಸಣ್ಣ ಮಾಂಸಾಹಾರಿ ಪ್ರಾಣಿ. ವಿವಿಧ ರೀತಿಯ ಕ್ರಿಮಿಗಳು, ಗೊರಸು ಪ್ರಾಣಿಗಳ ಮರಿಗಳು, ಪಕ್ಷಿಗಳು ಮತ್ತು ವಿಷಯುಕ್ತ ಹಾವುಗಳನ್ನೂ ತಿನ್ನುವ ತರಕರಡಿ, ಇತರ ಪ್ರಾಣಿಗಳು ಕೊಂದ ಪ್ರಾಣಿಗಳ ಶವಭಕ್ಷಣೆಯನ್ನೂ ಮಾಡುತ್ತವೆಯೆಂದು ದಾಖಲಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ರ ಶೆಡ್ಯೂಲ್ ೧ರ ಪಟ್ಟಿಯಲ್ಲಿರುವ ತರಕರಡಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಛಾಯಾಚಿತ್ರದಲ್ಲಿ ದಾಖಲಾಗಿದೆ. ಕಾವೇರಿ ವನ್ಯಜೀವಿಧಾಮದಲ್ಲಿ ಚಿರತೆ ಸಾಂದ್ರತೆಯನ್ನು ಅಂದಾಜಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನೇಚರ್ ಕನ್ಸರ್‌ವೇಶನ್ ಫೌಂಡೇಶನ್ ಹಾಗೂ ಪ್ಯಾಂಥೆರಾ ತಂಡದಿಂದ ಕ್ಯಾಮೆರಾ ಟ್ರಾಪ್ ಕಾರ್ಯಾಚರಣೆ ನಡೆಯುತ್ತಿರುವಾಗ ಈ ತರಕರಡಿಯ ಫೋಟೋಗಳು, ನಾಲ್ಕು ವಲಯಗಳಲ್ಲಿ ಸೇರಿ ಒಟ್ಟು ೪೧ ಬಾರಿ ದಾಖಲಾಗಿದೆ. ಕ್ಯಾಮೆರಾ ಟ್ರಾಪಿಂಗ್‌ನೊಂದಿಗೆ ಇತರ ಕ್ರಮಗಳನ್ನೊಳಗೊಂಡು ವಿಸ್ತಾರವಾದ ಹಿಡುವಳಿಕೆ ಸಮೀಕ್ಷೆಯು, ಕರ್ನಾಟಕ ಮತ್ತು ನೆರೆಯ ಪ್ರದೇಶಗಳಲ್ಲಿ ಈ ಗೂಢ ಪ್ರಭೇದ ಪ್ರಾಣಿಯ ವಿಸ್ತರಣೆ ಹಾಗೂ ಇತರ ವಿಷಯಗಳ ತಿಳಿವಳಿಕೆಗೆ ಸಹಾಯವಾಗಬಹುದು. ತರಕರಡಿಯ ಹೊರತಾಗಿ ಈ ಅಧ್ಯಯನವು ಕಾವೇರಿ ವನ್ಯಜೀವಿಧಾಮದ ಇತರ ಸಣ್ಣ ಮಾಂಸಾಹಾರಿ ಪ್ರಾಣಿಗಳಾದ ಕಾಡು ಬೆಕ್ಕು, ಕಂದು ಚುಕ್ಕೆ ಬೆಕ್ಕು, ಮರ ಬೆಕ್ಕು, ಪುನುಗು ಬೆಕ್ಕು, ಕೀರ, ಬೆಟ್ಟದ ಕೀರ ಮತ್ತು ನೀರು ನಾಯಿಗಳನ್ನೂ ದಾಖಲಿಸಿದೆ. ಕಾವೇರಿಯ ತರಕರಡಿ ಹಾಗೂ ಇತರ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗೆಗಿನ ಕನ್ನಡದ ಒಂದು ಕಿರುಚಿತ್ರವನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.